ಸಖಿ ಸಮಯ... - Sakhi Samaya...

Amita Ravikirana

ಚಿಕ್ಕ ಚಿಕ್ಕ ಖುಷಿಗಳ ಹುಡುಕುತ್ತ,

  1. 03/12/2021

    ಅಭಿಷೇಕ ಮಾಡಿದಳು ಗೌರಿ- ವೈದೇಹಿ ಅವರ ಕವಿತೆ

    ಅಭಿಷೇಕ ಮಾಡಿದಳು ಗೌರಿ ತ್ರಿಲೋಕ ಸಂಚಾರಿಗೆ ಕರೆದೊಯ್ದಳು ಶಿವನ ಶುಭ್ರಸ್ನಾನಕ್ಕೆ ಮೂಗಾಲು ಮಣೆಯಲ್ಲಿ ಮೂಗಣ್ಣಿನವನ ಕುಳ್ಳಿರಿಸಿ ಪ್ರೀತಿಯೊತ್ತಿ ಮೂಜಗದಲೋಡಾಡಿ ಎಂತು ದಣಿದವೋ ಪಾದ ಎಂಬ ನೆಪತುದಿಯಿಂದ ಧೂಳನೆತ್ತಿ ಯಾರ ಮನೆ ಬೀದಿಯದು ಪತ್ತೆ ಹಚ್ಚಿ ನಗುವ ನಟರಾಜನನು ಕರೆವಳೋ ಸ್ನಾನಕ್ಕೆ ದುಃಖ ಹತ್ತಿಕ್ಕಿ ಮುಗಿಯಿತೇ ಬೇಟೆ? ಪ್ರಶ್ನೆ ಚುಚ್ಚಿ ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ ಇದು ಇಗೋ ಆ ಮಣಿಕರ್ಣಿಕೆಗೆ ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು ಕಡೆಯದಿಗೋ ನನ್ನ ಅನುದಿನದ ಬಡ ಕನಲು ಎಂದಾಗ ನೀರೊಳಗೆ ಗೌರಿ ಕಂಬನಿ ಬಿಂದು ಮಿಸಕ್ಕನೆ ಬೆರೆತು ಬಿಸಿಯಾಗಲು ‘ಆಯ್’ ಎಂದು ಶಿವ ಬೆವರಿ ‘ನನ್ನನೇನೆಂದುಕೊಂಡೆ? ನಿನ್ನ ಬಿಟ್ಟರೆ ಶುದ್ಧ ಬೈರಾಗಿ’ ‘ಈ ಮಾತಿಗೆ ಶಿವನೇ ನಾನೆಷ್ಟನೆಯ ನಾರಿ?’ ಎನ್ನುತ್ತ ಮೃದು ಚಿವುಟಿ ಮೀಸುವಳು ನಮ್ಮ ಗೌರಿ. ಬೈರಾಗಿ ಬೂದಿ ತೊಳೆಯುತ್ತ ಹಚ್ಚಗೆ ನೋಡುವಳು ಮೆತ್ತಗೆ ಮೈ ಒರೆಸಿ ತಂಬಾಲು ಕುಡಿಸಿ ತೊಡೆ ಮೆತ್ತೆಯನು ನೀಡಿ ಕೋರುವಳು ಶಿವ ಶಿವಾ! ಎಲ್ಲ ನದಿಗಳ ನೆನೆದು ಮಲಗು ದೇವ! ನುಡಿ ರೇಶಿಮೆಯಡಿ ನಂಜು ನುಂಗಿದ ಕಿರಾತ ಹೃದಯದಲಿ ಕಚಗುಳಿಯ ಹೂವು ಹರಿಗೋಲು ಕಚಗುಳಿಯ ಹರಿಗೋಲು ಹರನ ಹತ್ತಿಸಿಕೊಂಡು ಮತ್ತೆ ಸಾಗಿತು ಗೌರಿಯಿಂದ ದೂರ ಶಿವನಿದ್ದೂ ಶಿವನಿಲ್ಲದಂಥಚೋದ್ಯಗಳೆಲ್ಲ ಹೊಸತೇನು ಶಿವಕಾಮಿಗೆ? ಮಿಸುಕಾಡದೇ ಕುಳಿತು ತಲ್ಲಣವ ತಡೆಯುವ ಆರ್ದ್ರ ಗರ್ವದ ಹುಡುಗಿ ನಮ್ಮ ಗೌರಿ ಸಂಚಾರ ಮುಗಿಸಿ ಬರುವ ಈಶ್ವರ ಜೋಗಿ ಗೌರಿ ಕರೆವಳು ಅವನ ಸ್ನಾನಕಾಗಿ ಮದ್ದಿನೆಣ್ಣೆಯ ಪೂಸಿ, ಬಿದ್ದ ಕಂಗಳ ಒರೆಸಿ ಜ್ವರ ಹಿಡಿಸಿಕೊಂಡಿರುವ ಲೋಕ ಸಂಚಾರಿಗೆ ಕಿರಾತ ಕಡ್ಡಿಯ ಕಷಾಯ ಕುಡಿಸಿ.

About

ಚಿಕ್ಕ ಚಿಕ್ಕ ಖುಷಿಗಳ ಹುಡುಕುತ್ತ,